ವೆಂಕಟಪ್ಪನಾಯಕ 1

	ಕೆಳದಿಯ ರಾಜಮನೆತನದ ಅರಸು (1660-61). ಶಿವಪ್ಪನಾಯಕನ ತಮ್ಮ. ಅಣ್ಣನ ಮರಣಾನಂತರ ವೆಂಕಟಪ್ಪ ನಾಯಕ ಅರಸನಾದ.

	ಶಿವಪ್ಪನಾಯಕ ಪೋರ್ಚುಗೀಸರನ್ನು ರಾಜ್ಯದಿಂದ ಹೊರಹಾಕಿದ್ದರಿಂದ ಪೋರ್ಚುಗೀಸರು ಕರ್ನಾಟಕದ ವ್ಯಾಪಾರವನ್ನು ಸಾಧ್ಯವಾದಷ್ಟು ಪಲ್ಲಟ ಮಾಡುತ್ತಿದ್ದರು. ಅವರು ವೆಂಕಟಪ್ಪನಾಯಕನ ಧ್ವಜವನ್ನು ಹೊಂದಿದ್ದ ಒಂದು ಹಡಗನ್ನು ಸೆರೆಹಿಡಿದು, ಹಲವು ನಾವಿಕರನ್ನು ಕ್ರೈಸ್ತಮತಕ್ಕೆ ಮತಾಂತರಗೊಳಿಸಿದರು. ಈ ಸುದ್ದಿಯಿಂದ ವೆಂಕಟಪ್ಪನಾಯಕ ಕ್ರುದ್ಧನಾಗಿ ಗೋವಕ್ಕೆ ಪ್ರಯಾಣ ಮಾಡುತ್ತಿದ್ದ ಒಬ್ಬ ಐರೋಪ್ಯ ಪಾದ್ರಿಯನ್ನು ಬಂಧನದಲ್ಲಿಟ್ಟ. ಶಿವಪ್ಪನಾಯಕ ಪೋರ್ಚುಗೀಸರಿಂದ ಸೆರೆಹಿಡಿದಿದ್ದ ಯುದ್ಧದ ಏಳು ಕಾವಲು ಹಡಗುಗಳನ್ನು ಹಿಂತಿರುಗಿಸಲಿಲ್ಲ. ಪೋರ್ಚು ಗೀಸರು ಅರಿಕೆಮಾಡಿಕೊಂಡ ಮೇಲೆ ಅವುಗಳನ್ನು ಬಿಟ್ಟುಕೊಟ್ಟ. ಅವರ ಮೈತ್ರಿ ಬೆಳೆಸಲು ಪ್ರಯತ್ನಿಸಿದ ವೆಂಕಟಪ್ಪನಾಯಕ ಡಚ್ಚರೊಡನೆಯೂ ಮೈತ್ರಿ ಹೊಂದಿದ್ದ.

	ಇವನ ಕಾಲದಲ್ಲಿ ಬಿಜಾಪುರದ ಆದಿಲ್ ಷಾ ಕೆಳದಿ ರಾಜ್ಯವನ್ನು ಪೊಗದಿ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸಿ ವೆಂಕಟಪ್ಪನಾಯಕನಿಂದ ಹಣ ಕಸಿದುಕೊಳ್ಳಲು ಸೇನಾಪತಿ ಸಲಾಬತ್‍ಖಾನನನ್ನು ಅಣಿ ಮಾಡಿದ. ಆದರೆ ಇದು ಸಫಲವಾಗಲಿಲ್ಲ. ವೆಂಕಟಪ್ಪನಾಯಕ ವಿಜಯನಗರದ ಶ್ರೀರಂಗನಾಯಕನಿಗೆ ಶ್ರೀರಂಗಪಟ್ಟಣದಿಂದ ಆಗಾಗ ಉಂಟಾಗುತ್ತಿದ್ದ ಕಿರುಕುಳ ತಪ್ಪಿಸಲು ಅಲ್ಲಲ್ಲೇ ಗಡಿಗಳಲ್ಲಿ ಸೈನ್ಯವನ್ನಿಟ್ಟಿದ್ದ. ಆದರೂ ಮೈಸೂರು ಸೈನ್ಯ 1661ರ ಅಂತ್ಯದಲ್ಲಿ ಹೆಬ್ಬಾಲೆ ಕೋಟೆಯನ್ನು ವಶಪಡಿಸಿಕೊಂಡಿತು.

	ಈತ ಮಠಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳಿಗೆ ಕೆಳದಿ ರಾಜರು ತಲೆಮಾರುಗಳಿಂದ ನೀಡುತ್ತಿದ್ದ ಪ್ರೋತ್ಸಾಹವನ್ನು ಮುಂದುವರಿಸಿದ. ಶಿವತತ್ತ್ವರತ್ನಾಕರದ ಪ್ರಕಾರ ಇವನು ಸ್ವಲ್ಪಕಾಲ ರಾಜ್ಯವಾಳಿ ಈತನ ಸೋದರ ಭದ್ರಪ್ಪನಿಗೆ ಪಟ್ಟ ಕಟ್ಟಿದ.	
												(ಎ.ವಿ.ವಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ